ಚಳ್ಳಾಗುರ್ಕಿ-
ಬಳ್ಳಾರಿ ತಾಲ್ಲೂಕಿನ ಅನಂತಪುರ ರಸ್ತೆಯಲ್ಲಿ ಬಳ್ಳಾರಿಯಿಂದ 26 ಕಿ.ಮೀ. ದೂರದಲ್ಲಿರುವ ಗ್ರಾಮ. ಎರ್ರಿತಾತ ಎಂಬ ಮಹಾಪುರುಷನ ಜೀವಸಮಾಧಿ ಇಲ್ಲಿರುವುದರಿಂದ ಪ್ರಸಿದ್ಧ ಯಾತ್ರಾಸ್ಥಳವೆನಿಸಿದೆ. ಈ ಮಹಾಪುರುಷ ಬಡಕುಟುಂಬದಲ್ಲಿ ಜನಿಸಿ ಸಾಕಷ್ಟು ವಿದ್ಯಾಭ್ಯಾಸವೂ ಇಲ್ಲದೆ ಬೆಳೆದು ಉತ್ತಮ ಸಾಧನಾಜೀವಿಯಾಗಿ ತನ್ನ ಆಧ್ಯಾತ್ಮಿಕ ವರ್ಚಸ್ಸಿನಿಂದ ಸಾಧುವಾಗಿ ಮಾರ್ಪಟ್ಟ. 1897ರಲ್ಲಿ ಈತ ಚೆಳ್ಳಗುರ್ಕಿಗೆ ಬಂದು ನೆಲಸಿದ. 25 ವರ್ಷ ಅಲ್ಲಿ ವಾಸವಾಗಿದ್ದ. 1922ರಲ್ಲಿ ಸಮಾಧಿಸ್ಥನಾದ. ಅನೇಕ ಪವಾಡಗಳನ್ನೂ, ಮಹಿಮೆಗಳನ್ನೂ ಮೆರೆದ ಖ್ಯಾತಿ ಈತನದು. ಈಗಲೂ ಕರ್ನಾಟಕದ ಮೂಲೆ ಮೂಲೆಗಳಿಂದ ಯಾತ್ರಿಕರು ಬಹುಸಂಖ್ಯೆಯಲ್ಲಿ ಇಲ್ಲಿಗೆ ಬಂದು ಪೂಜೆಸಲ್ಲಿಸಿ ಹೋಗುತ್ತಾರೆ. ವಿಶೇಷವಾಗಿ, ಅಮಾವಾಸ್ಯೆಯ ದಿನಗಳಲ್ಲಿ ಭಕ್ತಸಮೂಹ ಇಲ್ಲಿ ಹೆಚ್ಚಾಗಿರುತ್ತದೆ. ಪ್ರತಿವರ್ಷ ಇಲ್ಲಿ ರಥೋತ್ಸವದ ವೇಳೆಯಲ್ಲಿ ದೊಡ್ಡ ಜಾತ್ರೆ ಸೇರುತ್ತದೆ. ಈ ಕ್ಷೇತ್ರದಲ್ಲಿ ಯಾತ್ರಿಕರಿಗೆ ಊಟವಸತಿಯ ಸೌಕರ್ಯಗಳಿವೆ. ಇಲ್ಲಿನ ಜನರಿಗಾಗಿ ಪ್ರೌಢಶಾಲೆ, ಆಸ್ಪತ್ರೆಗಳನ್ನು ನಡೆಸಲಾಗುತ್ತದೆ.      (ಜಿ.ಆರ್.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ